ಚಿಕ್ಕಮಗಳೂರು: ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ ಅವರು ಇಂದು ನಗರಸಭೆ, ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಸಾರ್ವಜನಿಕ ದೂರು ಪೆಟ್ಟಿಗೆಯಲ್ಲಿ ೨೦೨೦ರ ದೂರು ಪತ್ರ ಪತ್ತೆಯಾದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಅವರು ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ದೂರು ಪತ್ರಗಳಿಗೆ ಸಂಬಂಧಿಸಿದಂತೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಗೆ ಭೇಟಿ ನೀಡಿದ ಅವರು ಈ ಸಂದರ್ಭದಲ್ಲಿ ದೂರು ಪೆಟ್ಟಿಗೆಯನ್ನು ಗಮನಿಸಿದ ಅವರು ಅದನ್ನು ತೆರೆಯುವಂತೆ ಸೂಚಿಸಿದಾಗ ನಗರಸಭೆಯ ಅಧಿಕಾರಿಗಳು ಪೆಟ್ಟಿಗೆಯ ಕೀ ಕಳೆದು ಹೋಗಿರುವುದಾಗಿ ವಿವರಣೆ ನೀಡಿದರು. ಉಪಲೋಕಾಯುಕ್ತರ ಸೂಚನೆ ಮೇರೆಗೆ ದೂರು ಪೆಟ್ಟಿಗೆಯ ಬೀಗ ಒಡೆದಾಗ ೨೦೨೦ ರಿಂದೀಚೆಗೆ ಸಾರ್ವಜನಿಕರು ಹಾಕಿದ್ದ ಹಲವು ಪತ್ರಗಳು ಪತ್ತೆಯಾದವು ಅವುಗಳನ್ನು ಕೂಡಲೇ ಪರಿಶೀಲಿಸಿ ಅವುಗಳಿಗೆ ಸ್ಪಂದಿಸುವಂತೆ ತಿಳಿಸಿದ ಅವರು ಹಳೆಯ ದೂರು ಪೆಟ್ಟಿಗೆಯನ್ನು ತೆಗೆದು ಹೊಸ ಪೆಟ್ಟಿಗೆಯನ್ನು ಆಳವಡಿಸುವಂತೆ ಹಾಗೂ ನಗರಸಭೆ ಕಚೇರಿಯ ಟೇಬಲ್‌ಗಳ ಮೇಲಿದ್ದ ಕಡತಗಳನ್ನು ಗಮನಿಸಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದರು.
ಅವರು ನಗರದ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ಗಮನಿಸಿದ ಉಪಲೋಕಾಯುಕ್ತರು ಮಳೆ ಕಡಿಮೆಯಾದ ಕೂಡಲೇ ರಸ್ತೆಗಳನ್ನು ದುರಸ್ಥ್ಧಿಪಡಿಸುವಂತೆ ನಿರ್ದೇಶನ ನೀಡಿ, ಸಾರ್ವಜನಿಕರಿಂದ ನಗರಸಭೆಯ ವಿರುದ್ಧವೇ ಹೆಚ್ಚಾಗಿ ದೂರುಗಳು ಕೇಳಿ ಬರುತ್ತಿರುವುದರಿಂದ ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ತಿಳಿಸದರು ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಉಪಲೋಕಾಯುಕ್ತರು, ಮೂರು ದಿನಗಳಿಗೊಮ್ಮೆ ಆಸ್ಪತ್ರೆಯ ಬಯೋ ತ್ಯಾಜ್ಯವನ್ನು ಆಗಾಗ್ಗೆ ವಿಲೇವಾರಿ ಮಾಡುವಂತೆ ತಿಳಿಸಿದರಲ್ಲದೆ, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸುವುದು ಸಲ್ಲದು ಎಂದರು. ಬಳಿಕ ಪ್ರತಿಯೊಂದು ವಾರ್ಡ್‌ಗಳಿಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರಲ್ಲದೆ, ಆಸ್ಪತ್ರೆಯ ಊಟೋಪಚಾರದ ಬಗ್ಗೆ, ವೈದ್ಯರ ಆರೈಕೆಯ ಬಗ್ಗೆ ವಿವರ ಪಡೆದರು. ಸಂಜೆ ೬ ಗಂಟೆ ಬಳಿಕ ಸೊಳ್ಳೆ ಕಾಟವಿರುವುದರಿಂದ ಸೊಳ್ಳೆ ಪರದೆ ಅಳವಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು. ಆಸ್ಪತ್ರೆಯ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಹೇಳಿದರು.
ಉಪ ಲೋಕಾಯುಕ್ತರೊಂದಿಗೆ ಪರಿಶೀಲನೆ ಸಂದರ್ಭದಲ್ಲಿ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣಿಕರ್, ಶಿವಾಜಿ ಅನಂತ್ ನಲವಾಡೆ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ, ಹಾಸನ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯ ಉಪನಿಬಂಧಕರಾದ ಸ್ನೇಹಾ ಮತ್ತಿತರರು ಉಪಸ್ಥಿತರಿದ್ದರು.