ಬೆಳಗಾವಿ: ರಾಜ್ಯ ಸರ್ಕಾರ ಎನ್ ಡಿಆರ್ ಎಫ್ ಹಣವನ್ನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದೆ ಆರೋಪಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ , ಎನ್ ಡಿಆರ್ ಎಫ್ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿಲ್ಲ. ಬಿಜೆಪಿಯವರಿಗೆ ಒಂದು ರೀತಿ ಕಾಮಾಲೆ ರೋಗ ಇದ್ದಂತೆ. ಗ್ಯಾರಂಟಿ ಯೋಜನೆ ಸಕ್ಸಸ್ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಜಾರಿ ಮಾಡಲು ಆಗಲ್ಲ ಎಂದು ಮೋದಿ ಹೇಳಿದ್ದರು. ಕರ್ನಾಟಕದಲ್ಲಿ ಎರಡೂವರೆ ವರ್ಷದಿಂದ ಗ್ಯಾರಂಟಿ ಸಕ್ಸಸ್ ಆಗಿದೆ . ಹಾಗಾಗಿ ಬಿಜೆಪಿಯವರಿಗೆ ತಳಮಳ ಆಗಿ ಬಿಟ್ಟಿದೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕವನ್ನುಂಟು ಮಾಡಿದೆ. ನಮ್ಮ ಗ್ಯಾರಂಟಿಗಳನ್ನು ಬಿಹಾರ , ದೆಹಲಿ, ಮಹಾರಾಷ್ಟ್ರ, ಮದ್ಯಪ್ರದೇಶ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನುಕರಿಸಿದ್ದಾರೆ. ಪ್ರಧಾನಿ ಮೋದಿಯವರು , ಗ್ಯಾರಂಟಿಗಳ ಅನುಷ್ಠಾನ ಸಾಧ್ಯವೇ ಇಲ್ಲ ಎಂದಿದ್ದರು. ಆದರೆ ಕಾಂಗ್ರೆಸ್ ಸರ್ಕಾರ , ನುಡಿದಂತೆ ನಡೆದು ಗ್ಯಾರಂಟಿಗಳನ್ನು ತಪ್ಪದೇ ನೀಡುತ್ತಿದ್ದೇವೆ ಎಂದರು.
ಬಿಮ್ಸ್ ಆಸ್ಪತ್ರೆ-ಖಾಸಗಿ ನಿರ್ವಹಣೆ ಇಲ್ಲ
ಇಂದು ಬೆಳಗಾವಿಯ ಬಿಮ್ಸ್ ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 2017 ರಲ್ಲಿ ಶಂಕುಸ್ಥಾಪನೆ ಹಾಗೂ ಇಂದು ಉದ್ಘಾಟನೆ ನೆರವೇರಿಸಿರುವುದು ಸಂತಸ ತಂದಿದೆ. ಬಿಜೆಪಿಯ ಅವಧಿಯಲ್ಲಿ ಈ ಯೋಜನೆ ಕಾರ್ಯಗತವಾಗಿರಲಿಲ್ಲ. ಆಸ್ಪತ್ರೆಯ ನಿರ್ವಹಣೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ನೀಡಲಾಗಿಲ್ಲ ಎಂದರು.
ಕಾಂಗ್ರೆಸ್ ನ ಆಂತರಿಕ ವಿಚಾರದಲ್ಲಿ ಬಿಜೆಪಿ ತಲೆಕೆಡಿಸಿಕೊಳ್ಳಬೇಕಿಲ್ಲ
ಶಾಸಕ ಸಿ.ಟಿ.ರವಿಯವರು ಮುಖ್ಯಮಂತ್ರಿಯವರ ವಿಚಾರದಲ್ಲಿ ಮಾಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಹುದ್ದೆ ವಿಷಯ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದ್ದು, ಇದಕ್ಕೆ ಬಿಜೆಪಿ ತಲೆಕೆಡಿಸಿಕೊಳ್ಳುವುದು ಬೇಕಿಲ್ಲ ಎಂದರು.