ಭೂಪಾಲ್: ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ತನಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದ ಅಪರಾಧಿಗೆ 10 ಗಿಡಗಳನ್ನು ನೆಟ್ಟು ಪೋಷಿಸುವಂತೆ ಸೂಚಿಸಿ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲು ಮಧ್ಯಪ್ರದೇಶ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.
ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹೇಶ್ ಶರ್ಮಾ ಎಂಬ ಅಪರಾಧಿಗೆ 2021ರಲ್ಲಿ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ತನ್ನ ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸುವಂತೆ ಮಹೇಶ್ ಶರ್ಮಾ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದನು.
ಅವನ ಅರ್ಜಿಯನ್ನು ಪುರಸ್ಕರಿಸಿರುವ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ವಿಭಾಗೀಯ ಪೀಠವು, ಹಿಂಸಾಚಾರ ವಿರೋಧಿ ಭಾವನೆಯನ್ನು ಬೆಳೆಸಿಕೊಳ್ಳಲು ಸಲಹೆ ನೀಡಿತು. ಅಲ್ಲದೆ ಇದಕ್ಕಾಗಿ 10 ಬೇವು ಮತ್ತು ಅರಳಿ ಸಸಿಗಳನ್ನು ನೆಟ್ಟು ಪೋಷಿಸುವಂತೆ ನಿರ್ದೇಶನ ನೀಡಿ, ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ.
ವಿಚಾರಣಾ ನ್ಯಾಯಾಲಯವು ಮಹೇಶ್ ಶರ್ಮಾ ಅವರು ನೆಟ್ಟು ಬೆಳೆಸುವ ಮರಗಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ತಿಳಿಸಿರುವ ನ್ಯಾಯಪೀಠವು ಅಪರಾಧಿಯು 10 ಹಣ್ಣು ಬಿಡುವ, ಬೇವು ಅಥವಾ ಅರಳಿ ಸಸಿಗಳನ್ನು ನೆಡಬೇಕು. ಅವುಗಳನ್ನು ನೋಡಿಕೊಳ್ಳಬೇಕು. ಬಿಡುಗಡೆಯಾದ 30 ದಿನಗಳೊಳಗೆ ಛಾಯಾಚಿತ್ರಗಳನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
50 ಸಾವಿರ ರೂ. ಬಾಂಡ್ ಮತ್ತು ಇಬ್ಬರು ಶ್ಯೂರಿಟಿಗಳನ್ನು ಒದಗಿಸಬೇಕು. ಅಗತ್ಯವಿದ್ದಾಗ ನ್ಯಾಯಾಲಯದ ರಿಜಿಸ್ಟ್ರಾರ್ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಆತನಿಗೆ ಜಾಮೀನು ನೀಡಿದೆ. ದಂಡ ಪಾವತಿ ಸೇರಿದಂತೆ ಮೇಲ್ಮನವಿ ಇತ್ಯರ್ಥವಾಗುವವರೆಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಹಿಂಸೆ ಮತ್ತು ದುಷ್ಟತನದ ಕಲ್ಪನೆಯನ್ನು ಸೃಷ್ಟಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವುದರಿಂದ ಎದುರಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ವಿಸ್ತಾರವಾಗಿ ವಿವರಿಸಿರುವ ನ್ಯಾಯಮೂರ್ತಿಗಳು, ಮಾನವ ಅಸ್ತಿತ್ವದ ಅಗತ್ಯ ಅಂಶಗಳಾಗಿ ಕರುಣೆ, ಸೇವೆ, ಪ್ರೀತಿ ಮತ್ತು ದಯೆಯ ಗುಣಗಳನ್ನು ಬೆಳೆಸುವ ಅವಶ್ಯಕತೆಯಿದೆ. ಯಾಕೆಂದರೆ ಇವು ಮೂಲಭೂತ ಮಾನವ ಪ್ರವೃತ್ತಿಗಳಾಗಿವೆ. ಜೀವವನ್ನು ಸಂರಕ್ಷಿಸಲು ಅವುಗಳನ್ನು ಪುನರುಜ್ಜೀವನಗೊಳಿಸಬೇಕು. ಈ ಪ್ರಯತ್ನವು ಕೇವಲ ಮರ ನೆಡುವ ಪ್ರಯತ್ನವಲ್ಲ, ಬದಲಾಗಿ ಒಂದು ಕಲ್ಪನೆಯ ಬೀಜವನ್ನು ಬಿತ್ತುವ ಪ್ರಯತ್ನವಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಜಾಮೀನಿಗಾಗಿ ಪ್ರಕರಣವನ್ನು ಮಂಡಿಸಿದ ಅನಂತರ ಜಾಮೀನು ನೀಡಲಾಗುತ್ತದೆ. ಅನಂತರ ಸಸಿಗಳನ್ನು ನೆಡಲು ನಿರ್ದೇಶನ ನೀಡಲಾಗುತ್ತದೆ. ಸಾಮಾಜಿಕ ಉದ್ದೇಶಕ್ಕಾಗಿ ಸೇವೆ ಸಲ್ಲಿಸಲು ಉದ್ದೇಶಿಸಿರುವ ವ್ಯಕ್ತಿಯ ಅರ್ಹತೆಯನ್ನು ಪರಿಗಣಿಸದೆ ಜಾಮೀನು ನೀಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.