ಶಿವಮೊಗ್ಗ: ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ 2025-26ನೇ ಸಾಲಿನ ಕ್ರೀಡಾಕೂಟಕ್ಕೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ನಂತರ ನಡೆದ ಸಮಾರಂಭದಲ್ಲಿ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ವಿಭಾಗದ ಉಪ ನಿರ್ದೇಶಕ ಎಸ್.ಚಂದ್ರಪ್ಪ ಅವರು ಮಾತನಾಡಿ, ಕ್ರೀಡೆಯು ಶಿಕ್ಷಣದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸದಢತೆ ಕಾಯ್ದುಕೊಳ್ಳಬಹುದು. ಅಲ್ಲದೆ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಕ್ರೀಡೆಯಲ್ಲಿ ಸಾಧನೆಗೆ ಸಾಕಷ್ಟು ಅವಕಾಶ ಇದ್ದು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಜಾವಳ್ಳಿಯ ಶ್ರೀ ಅರಬಿಂದೋ ಫೌಂಡೇಷನ್ ಫಾರ್ ಎಜುಕೇಷನ್ ಶೈಕ್ಷಣಿಕ ನಿರ್ದೇಶಕ ಎಚ್‍ಎನ್ ಅವರು ದ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ಪಂಡರಿನಾಥ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಯೋಗೀಶ್, ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಂ.ಜೋಸೆಫ್, ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕ ಡಿ.ಟಿ ಶಶಿಧರ, ಶಿವಮೊಗ್ಗದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಫ್.ಕೆ.ಕುಟ್ರಿ, ಕ್ರೀಡಾ ಸಂಯೋಜಕ ಕೆ.ನಾಗೇಂದ್ರ ಪ್ರಸಾದ್, ವಿವಿಧ ಕಾಲೇಜಿನ ಉಪನ್ಯಾಸಕರು, ಕ್ರೀಡಾ ಪಟುಗಳು ಹಾಜರಿದ್ದರು.
ವಿದ್ಯಾರ್ಥಿನಿ ಮೈತ್ರೇಯ ಸಂಗಡಿಗರು ಪ್ರಾರ್ಥಿಸಿ, ಉಪ ಪ್ರಾಚಾರ್ಯರಾದ ಎಂ.ಇ.ಆಶಾ ಸ್ವಾಗತಿಸಿ, ವಿಘ್ನೇಶ್ವರ ಘೋಡೆ ವಂದಿಸಿದರು.
previous post