ಸಹ್ಯಾದ್ರಿ ಸುದ್ದಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ರಾಜ್ಯದ ಪಾಲಿಟೆಕ್ನಿಕ್‌ಗಳಲ್ಲಿ ಕನಿಷ್ಠ ನಾಲ್ಕು ಕೋರ್ಸ್‌ಗೆ ತೀರ್ಮಾನ

ಚಿಕ್ಕಮಗಳೂರು: ರಾಜ್ಯದ ಎಲ್ಲ ಪಾಲಿಟೆಕ್ನಿಕ್‌ಗಳಲ್ಲಿ ಸಮಾನಾಂತರವಾಗಿ ಕನಿಷ್ಠ ನಾಲ್ಕು ಕೋರ್ಸ್‌ಗಳನ್ನು ಆರಂಭಿಸಲು ಹಾಗೂ ಬೇಡಿಕೆ ಇರುವ ಕಡೆಗಳಲ್ಲಿ ಅಗತ್ಯವಿರುವ ಹೆಚ್ಚುವರಿ ಕೋರ್ಸ್‌ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಸದ್ಯದಲ್ಲೇ ತಾಂತ್ರಿಕ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ರಾಜ್ಯ ಉನ್ನತ ಶಿಕ್ಷಣ ಖಾತೆ ಸಚಿವರಾದ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ತರೀಕೆರೆಯ ಭಾವಿಕೆರೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ತರೀಕೆರೆಯ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಬೆಂಗಳೂರಿನ ರೈಟ್ಸ್ ಲಿಮಿಟೆಡ್‌ನ ಸಂಯುಕ್ತ ಆಶ್ರಯದಲ್ಲಿ  ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದ ಉದ್ಘಾಟನೆ ಹಾಗೂ ಹೆಚ್ಚುವರಿ ಕೊಠಡಿಗಳು ಮತ್ತು ವರ್ಕ್‌ಶಾಪ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪಾಲಿಟೆಕ್ನಿಕ್‌ಗಳಲ್ಲಿ ಆಯಾ ಭಾಗಗಳಲ್ಲಿರುವ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ಈ ಬಗ್ಗೆ ಎ.ಐ.ಸಿ.ಟಿ.ಗೆ ಪ್ರಸ್ತಾವನೆ ಕಳುಹಿಸಲಾಗುವುದು. ಈ ಬಗ್ಗೆ ಹಣಕಾಸು ಇಲಾಖೆಯ ಗಮನಕ್ಕೂ ತಂದಿದ್ದು, ಮುಂದಿನ ವರ್ಷದಿಂದಲೇ ಸಮಾನಾಂತರವಾಗಿ ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಸ್ಥಳಾವಕಾಶ ಹೊಂದಿರುವ ಹಳೆಯ ಪಾಲಿಟೆಕ್ನಿಕ್‌ಗಳಲ್ಲಿ ಹೆಚ್ಚುವರಿ ಕೋರ್ಸ್‌ಗಳನ್ನು ಹಾಗೂ ಉದಯೋನ್ಮುಖ ಕೋರ್ಸ್‌ಗಳನ್ನು ಕೂಡ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯದಲ್ಲಿ ೧೦೭ ಪಾಲಿಟೆಕ್ನಿಕ್‌ಗಳಿದ್ದು, ರಾಜ್ಯದ ಪ್ರಪ್ರಥಮ ಸಂಸ್ಥೆಯಾದ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಮಾತ್ರ ೧೬ ಕೋರ್ಸ್‌ಗಳಿರುವುದನ್ನು ಹೊರತುಪಡಿಸಿದರೆ ತಲಾ ೮ ರಿಂದ ೯ ಕೋಟಿ ರೂ. ವೆಚ್ಚ ಮಾಡಿ ಪ್ರಾರಂಭಿಸಿದ ೩ ಪಾಲಿಟೆಕ್ನಿಕ್‌ಗಳಲ್ಲಿ ಕೇವಲ ಒಂದು ಕೋರ್ಸ್ ಮಾತ್ರ ಇದೆ. ಸುಮಾರು ೧೩ ಪಾಲಿಟೆಕ್ನಿಕ್‌ಗಳಲ್ಲಿ ಎರಡು ಕೋರ್ಸ್‌ಗಳು ಮಾತ್ರ ಇವೆ. ಇನ್ನು ೪ ಕೋರ್ಸ್‌ಗಳಿರುವ ಪಾಲಿಟೆಕ್ನಿಕ್‌ಗಳು ಬೇರೆಯೇ ಇವೆ ಎಂದು ಹೇಳಿದರು.

೨೦೨೩ರ ನವೆಂಬರ್‌ನಲ್ಲಿ ತರೀಕೆರೆ ಮತ್ತು ಹಾವೇರಿ ಜಿಲ್ಲೆಯ ಬ್ಯಾಡಗಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಾಲ್ಕು ವಿಭಾಗಗಳನ್ನು ಆರಂಭಿಸಲು ಎ.ಐ.ಸಿ.ಟಿ.ಗೆ ಪ್ರಸ್ತಾವನೆಯನ್ನು ಸಲ್ಲಿಸಿ ಅನುಮತಿ ದೊರಕಿದ ಬಳಿಕ ಈ ಯೋಜನೆ ಕಾರ್ಯಗತವಾಗಿದೆ. ಈಗಾಗಲೇ ಕಾಲೇಜು ಆರಂಭವಾಗಿ ತಡವಾಗಿದ್ದು, ಇದೀಗ ಉದ್ಘಾಟಿಸಲಾಗಿದೆ. ಕಡೂರಿನಲ್ಲಿ ೨೦೨೩ ರಲ್ಲೇ ೩ ಕೋರ್ಸ್‌ಗಳ ಪಾಲಿಟೆಕ್ನಿಕ್ ಪ್ರಾರಂಭವಾಗಿದ್ದು, ಅಧಿಕೃತವಾಗಿ ಇನ್ನೂ ಉದ್ಘಾಟನೆಯಾಗಿಲ್ಲ ಎಂದರು.

ಬಹಳಷ್ಟು ಜಿಲ್ಲೆಗಳಲ್ಲಿ ಪಾಲಿಟೆಕ್ನಿಕ್‌ಗಳು, ಇಂಜಿನಿಯರಿಂಗ್ ಕಾಲೇಜುಗಳಿಗೆ ಬೇಡಿಕೆ ಇರುವುದಾಗಿ ತಿಳಿಸಿದ ಅವರು, ಕೆಲವು ಕಡೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪಾಲಿಟೆಕ್ನಿಕ್‌ಗಳು ಹಾಗೂ ಕಾಲೇಜುಗಳು ಇರುವುದು ತಮ್ಮ ಗಮನಕ್ಕೆ ಬಂದಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು ದಾಖಲಾತಿ ಅನುಪಾತ ಎನ್ನಲಾಗುತ್ತದೆ. ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ದಾಖಲಾತಿ ಪ್ರಮಾಣದಲ್ಲಿ ರಾಷ್ಟ್ರೀಯ ಸರಾಸರಿ ಶೇ.೩೦ ರಷ್ಟಿದೆ. ಬೇರೆ ಬೇರೆ ಕೆಲವು ಸಣ್ಣ ಸಣ್ಣ ರಾಜ್ಯಗಳು, ಕೇರಳ, ತಮಿಳುನಾಡುಗಳಲ್ಲಿ ಶೇ.೪೭ ರಿಂದ ಶೇ.೫೦ ಕ್ಕಿಂತ ಹೆಚ್ಚಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಇನ್ನೂ ಹೆಚ್ಚಿವೆ. ನೀತಿ ಆಯೋಗದ ಹೊಸ ಅಧ್ಯಯನದ ಪ್ರಕಾರ ದೇಶದ ದಾಖಲಾತಿ ಅನುಪಾತದಲ್ಲಿ ಕರ್ನಾಟಕ ಶೇ.೩೬ ರಷ್ಟಿದೆ. ಆದರೆ ನೀತಿ ಆಯೋಗದಲ್ಲಿ ದೇಶದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ ಮಾಹಿತಿ ಬಹಿರಂಗಪಡಿಸಿದೆ. ರಾಷ್ಟ್ರೀಯ ಸರಾಸರಿ ಒಂದು ಲಕ್ಷ ಜನಸಂಖ್ಯೆಗೆ ೩೦ ಕಾಲೇಜು ಇರಬೇಕೆಂದು

ಶಾಸಕ ಜಿ.ಹೆಚ್.ಶ್ರೀನಿವಾಸ್ ಮಾತನಾಡಿ, ತಾವು ೨೦೧೩-೧೮ರವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿಯವರು ಇಡೀ ರಾಜ್ಯದಲ್ಲಿ ೧೭ ಕಾಲೇಜುಗಳನ್ನು ಮಂಜೂರು ಮಾಡಿದ್ದರು. ಆ ಹಿನ್ನೆಲೆಯಲ್ಲಿ ಇಲ್ಲಿ ಈ ಕಾಲೇಜು ಸ್ಥಾಪನೆ ಸಂಬಂಧ ಗುದ್ದಲಿಪೂಜೆ ನೆರವೇರಿಸಲಾಗಿತ್ತು. ಇದೀಗ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗಿದೆ. ಅದೇ ರೀತಿ ತುಂಬಾ ವರ್ಷಗಳ ಹಿಂದೆ ತರೀಕೆರೆ ಪದವಿ ಕಾಲೇಜು ಮಂಜೂರಾಗಿದ್ದರೂ ಜಾಗದ ಸಮಸ್ಯೆಯಿಂದಾಗಿ ಅರಣ್ಯ ಇಲಾಖೆಯಿಂದ ಜಾಗವನ್ನು ಗುತ್ತಿಗೆಗೆ ಪಡೆದುಕೊಂಡಿದ್ದರೂ ೧೦-೧೫ ವರ್ಷಗಳಾಗಿದ್ದರೂ ಕಾಲೇಜು ಆಗಿರಲಿಲ್ಲ. ಕೊನೆಗೂ ಈ ಯೋಜನೆ ಕಾರ್ಯಗತವಾಗಿದೆ. ಈ ಕಾಲೇಜಿನ ಕಟ್ಟಡದ ಮೇಲ್ಭಾಗದಲ್ಲಿ ಕಟ್ಟಡ ನಿರ್ಮಿಸಲು ಎರಡೂವರೆ ಕೋಟಿ ಹಣವನ್ನು ನೀಡಿದ್ದಾರೆ. ಆ ಕಾಮಗಾರಿಯೂ ಆರಂಭವಾಗಿದೆ ಎಂದು ತಿಳಿಸಿದರು.

ಈ ಕಾಲೇಜಿನ ಕಾಂಪೌಂಡ್, ಹಾಗೆಯೇ ಹೆಚ್ಚಿನ ಕೊಠಡಿಗಳು, ಪ್ರಯೋಗಶಾಲೆ, ಕಂಪ್ಯೂಟರ್ ವ್ಯವಸ್ಥೆಯಾಗಬೇಕಿದ್ದು, ಇವೆಲ್ಲಕ್ಕೂ ಸಚಿವರಾದ ಡಾ.ಸುಧಾಕರ್ ಅವರು ೧೦ ಕೋಟಿ ರೂ.ಗಳನ್ನು ಈ ತಕ್ಷಣಕ್ಕೆ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಒದಗಿಸಬೇಕೆಂದು ಕೋರಿದರಲ್ಲದೆ, ಈ ಭಾಗಕ್ಕೆ ಇಂಜಿನಿಯರಿಂಗ್ ಕಾಲೇಜು ಒದಗಿಸಬೇಕೆಂಬುದು ಕೂಡ ನಮ್ಮ ಬೇಡಿಕೆಯಾಗಿದೆ. ಇಲ್ಲಿನ ಪದವಿ ಕಾಲೇಜಿನಲ್ಲಿ ಸುಮಾರು ೬೦೦ ವಿದ್ಯಾರ್ಥಿಗಳಿದ್ದು, ಅಲ್ಲಿನ ಕೊಠಡಿಗಳನ್ನು ನಿರ್ಮಿಸಲು ತಮ್ಮ ಬೇಡಿಕೆಯಂತೆ ಸಚಿವರು ಸುಮಾರು ಒಂದು ಮುಕ್ಕಾಲು ಕೋಟಿ ಹಣವನ್ನು ಒದಗಿಸಿದ್ದು, ಕಟ್ಡಡ ಕಾಮಗಾರಿ ನಡೆಯುತ್ತಿದೆ. ಅದಲ್ಲದೆ ೫ ಕೋಟಿ ರೂ.ಗಳನ್ನು ಕೂಡ ಒದಗಿಸಿದ್ದು, ಅವುಗಳ ಆಧಾರದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.

ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಉಪಾಧ್ಯಕ್ಷ ಶಮಿಯುಲ್ಲಾ, ಬಾವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ವಿ.ಜಯಂತಿ ಮಧುಸೂದನ್ ಗೌಡ, ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೇಶವ ಮೂರ್ತಿ, ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಅರವಿಂದ್, ಮುಖಂಡರಾದ ಫಾರುಖ್, ದಯಾನಂದ್, ಜಿಲ್ಲಾ ಕೆ.ಡಿ.ಪಿ. ಸದಸ್ಯ ಸಿರಾಜ್, ಬಗರ್ ಹುಕುಂ ಸಮಿತಿ ಸದಸ್ಯ ಜಗದೀಶ್, ತಹಸೀಲ್ದಾರ್ ವಿಶ್ವಜಿತ್ ಮೆಹ್ತಾ, ಮಂಜುನಾಥ್, ಗುರುಮೂರ್ತಿ, ಕೆಂಪೇಗೌಡ, ಸೀತಾರಾಮ್ ಮತ್ತಿತರರು ಭಾಗವಹಿಸಿದ್ದರು.

 

Related posts

10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ನೌಕರರು ಖಾಯಂಗೆ ಅರ್ಹ- ಹೈಕೋರ್ಟ್

Editor

ಜಲ ವಿವಾದ: ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಸರ್ವರ ಸಹಕಾರ ಕೋರಿದ ಸಿಎಂ ಸಿದ್ದರಾಮಯ್ಯ

Editor

ರಾಜ್ಯದಲ್ಲಿ ‘ಕಾಟನ್ ಕ್ಯಾಂಡಿ’ ನಿಷೇಧ : ಗೋಬಿ ಮಂಚೂರಿಯಲ್ಲಿ ಬಣ್ಣ ಬಳಸುವಂತಿಲ್ಲ.

Editor