ಬೆಂಗಳೂರು: ರಾಜ್ಯದ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚೆಚ್ಚು ಕಂಡುಬರುತ್ತಿರುವ ಸಂದರ್ಭದಲ್ಲೇ ಆಘಾತಕಾರಿ ಮಾಹಿತಿ ಕೂಡ ಹೊರಬಿದ್ದಿದೆ. ಹೌದು ಕರ್ನಾಟಕದಲ್ಲಿ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆಗಳು ಇರುವುದು ಕಳೆದ ಮೂರು ವರ್ಷಗಳಲ್ಲಿ ನಡೆಸಿದ ತಪಾಸಣೆಗಳಿಂದ ತಿಳಿದುಬಂದಿದೆ.
ಜನ್ಮಜಾತ ಹೃದಯ ರೋಗ ಅಥವಾ ಕಾಯಿಲೆ ಎಂದರೆ ಜನಿಸುವ ಸಂದರ್ಭದಲ್ಲೇ ಹೃದಯ ಸಮಸ್ಯೆ ಇರುವ ಸ್ಥಿತಿಯಾಗಿದೆ. ಇಲ್ಲಿ, ಭ್ರೂಣದಲ್ಲಿದ್ದಾಗಲೇ ಶಿಶುವಿನ ಹೃದಯದಲ್ಲಿ ಬೆಳವಣಿಗೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡು ಹುಟ್ಟಿನ ನಂತರವೂ ಹಾಗೆಯೇ ಮುಂದುವರಿಯುತ್ತದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕರ್ನಾಟಕದಲ್ಲಿ ಈ ಬಗ್ಗೆ ಪತ್ತೆಹಚ್ಚಲಾಗುತ್ತದೆ.
ಹುಟ್ಟಿನಿಂದಲೇ ಹೃದಯ ರೋಗಗಳನ್ನು ಹೊಂದಿರುವ ಸುಮಾರು 20 ಸಾವಿರದಷ್ಟು ಮಕ್ಕಳಿಗೆ ಚಿಕಿತ್ಸೆ ದೊರೆಯದೇ ಇರುವುದು ಹೃದಯಾಘಾತದಂತಹ ಪ್ರಕರಣಗಳ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (RBSK) ಅಡಿಯಲ್ಲಿ ತಪಾಸಣೆಗೆ ಒಳಪಡಿಸಿ ಜನ್ಮಜಾತ ಹೃದಯ ರೋಗಗಳ ಬಗ್ಗೆ ಪತ್ತೆಮಾಡಲಾಗುತ್ತದೆ.
ರೋಗನಿರ್ಣಯ ಮಾಡಿದ ನಂತರ, ಬಾಧಿತ ಮಕ್ಕಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಉಚಿತವಾಗಿ ಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆಗಳಿಗೆ ತೆರಳುವಂತೆ ಶಿಫಾರಸು ಮಾಡಲಾಗುತ್ತದೆ.
ಪ್ರತಿ ಮಗುವನ್ನು ನಿಯಮಿತವಾಗಿ ಪತ್ತೆಹಚ್ಚುವುದು ಮತ್ತು ಅನುಸರಿಸುವುದು ಇಲ್ಲಿನ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಒಪ್ಪಿಕೊಂಡಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಹೆಚ್ಚಿನ ಯುವ ರೋಗಿಗಳು, ಅವರ ಕುಟುಂಬಗಳು ಒಂದು ಬಾರಿ ಚಿಕಿತ್ಸಗೆ ಬಂದುಹೋದ ನಂತರ ಸಮಾಲೋಚನೆ ಬರುತ್ತಿಲ್ಲ. ಅಗತ್ಯ ದಾಖಲೆಗಳನ್ನೂ ನಿರ್ವಹಿಸುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನ್ಮಜಾತ ಹೃದಯ ಕಾಯಿಲೆ: ಸೂಕ್ತ ಚಿಕಿತ್ಸೆಗೆ ಜನರು ಮಾಡಬೇಕಾದ್ದೇನು?
ಶಿಶು ಗರ್ಭದಲ್ಲಿರುವಾಗಲೇ ನಿಯಮಿತ ಸ್ಕ್ಯಾನಿಂಗ್ ಮಾಡುವ ಮೂಲಕ ಅನೇಕ ಜನ್ಮಜಾತ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಆದಾಗ್ಯೂ, ಜನನದ ನಂತರ ಆ ದಾಖಲೆಗಳನ್ನು ನಿರ್ವಹಿಸದೇ ಇದ್ದರೆ ಸಮಸ್ಯೆ ಆಗುತ್ತದೆ. ಹೀಗಾಗಿ ಸ್ಕ್ಯಾನಿಂಗ್ಗಳ ವೇಳೆ ಅಸಹಜತೆ ಕಂಡುಬಂದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆಯ ಕಾರ್ಯಕ್ರಮಗಳ ದತ್ತಾಂಶಗಳ ಜತೆ ಸೇರಿಸುವಂತೆ ಸೂಚಿಸುತ್ತಿದ್ದೇವೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಮಾಹಿತಿ ನೀಡಿದ್ದಾರೆ. ಈ ರೀತಿಯ ವ್ಯವಸ್ಥೆಯಿಂದ ನವಜಾತ ಶಿಶುಗಳನ್ನು ಗಮನಿಸುವುದು ಸುಲಭವಾಗುತ್ತದೆ ಎಂದು ಅವರು ಹೇಳಿದ್ದಾರೆ.