ಸಹ್ಯಾದ್ರಿ ಸುದ್ದಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ಸರ್ಕಾರಿ ನೌಕರರಿಗೆ ರಾಜ್ಯದ 8 ಕೋಟಿ ಜನರ ಜವಾಬ್ದಾರಿ: ನ್ಯಾ.ಕೆ.ಎನ್.ಫಣೀಂದ್ರ ಮಾರ್ಮಿಕ ಸಲಹೆ

ಚಿಕ್ಕಮಗಳೂರು: ರಾಜ್ಯದ ಅಂದಾಜು ಏಳು ಲಕ್ಷ ಸರ್ಕಾರಿ ನೌಕರರ ಭುಜದ ಮೇಲೆ ಸುಮಾರು ಎಂಟು ಕೋಟಿ ಜನಸಾಮಾನ್ಯರ ಸಮಸ್ಯೆಗಳ ಜವಾಬ್ದಾರಿ ಇದ್ದು, ಕರ್ತವ್ಯ ಪ್ರಜ್ಞೆಯಿಂದ, ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿಯ ಕರ್ತವ್ಯ ಎಂದು ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ನ್ಯಾಯಾಂಗ ನೌಕರರು, ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ನಿನ್ನೆ ಸಂಜೆ ನಗರದ ಕುವೆಂಪು ಕಲಾಮಂದಿರದಲ್ಲಿ ಲೋಕಾಯುಕ್ತ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಕರ್ತವ್ಯನಿಷ್ಠೆಯಿಂದ ಕಾರ್ಯ ನಿರ್ವಹಿಸದಿದ್ದರೆ ಅಂಥ ಜೀವನ ಜೀವನವಲ್ಲ. ನಾವು ಸತ್ತ ಮೇಲೂ ಜನರು ನೆನಸಿಕೊಳ್ಳುವ ಕೆಲಸ ಮಾಡಬೇಕು. ಬದುಕಿದರೂ ಸತ್ತಂತಿರಬಾರದು, ಸತ್ತರೂ ಬದುಕಿದಂತಿರಬೇಕು. ಸರ್ಕಾರ ಈ ಕೆಲಸ ನೀಡಿದ್ದರೂ ಸಮಾಜ ಸೇವೆ ಮಾಡುವುದಕ್ಕಾಗಿ ಭಗವಂತ ನಮಗೆ ನೀಡಿದ ಅವಕಾಶ ಎಂದು ಭಾವಿಸಿ ದೇವರಿಗೂ, ಸಮಾಜಕ್ಕೂ ಕೃತಜ್ಞರಾಗಿರಬೇಕು. ಸಮಾಜದಿಂದ ಕೇಳಿ ಬರುವ ಆರೋಪಗಳನ್ನು ತೊಡೆಯಲು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಇದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಹೇಳಿದರು.
ಕೆಲವೊಮ್ಮೆ ಸರ್ಕಾರಿ ನೌಕರನಾಗಿ ಅಥವಾ ಸಾರ್ವಜನಿಕ ನೌಕರನಾಗಿ ಯಾವುದೇ ಕರ್ತವ್ಯಲೋಪ ಎಸಗದಿದ್ದರೂ ದೂರು ನೀಡುವಂತಹ ಸನ್ನಿವೇಶವಿರುತ್ತದೆ. ದೂರು ಕೊಟ್ಟವರ ಉದ್ದೇಶ ಕಾನೂನಾತ್ಮಕವಾಗಿದ್ದರೂ ಕಾನೂನು ಬಾಹಿರವಾಗಿದ್ದರೂ ಹೆದರಿ ಕಾರ್ಯ ನಿರ್ವಹಿಸುತ್ತಾರೆ ಎಂಬ ದುರುದ್ದೇಶದಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ದೂರು ನೀಡುವ ಸಾಧ್ಯತೆ ಇದೆ. ಹೀಗಾಗಿ ಕೆಲವೊಮ್ಮೆ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವುದು ಕೂಡ ತಪ್ಪು ಎಂಬ ಭಾವನೆ ಬಂದುಬಿಟ್ಟಿದೆ. ಲೋಕಾಯುಕ್ತ ಕಾಯ್ದೆಯಲ್ಲಿ ದೂರುದಾರರಿಗೆ ಸವಲತ್ತುಗಳಿರುವಂತೆ ಅಧಿಕಾರಿಗಳಿಗೂ ಕೂಡ ರಕ್ಷಣೆಗಳಿರುವ ಬಗ್ಗೆ ಮನದಟ್ಟು ಮಾಡಿಕೊಡುವುದು ಅಗತ್ಯ. ಕೆ.ಸಿ.ಎಸ್.ಆರ್. ನಿಯಮಾವಳಿಗಳಲ್ಲದೆ, ಲೋಕಾಯುಕ್ತದ ಕಾನೂನಿನ ಅಧ್ಯಯನವನ್ನು ಅಧಿಕಾರಿಗಳು ಮಾಡಬೇಕಿದೆ. ಸರ್ಕಾರದಿಂದ ನೇರ ನೇಮಕಾತಿಯಾಗಿ ವೇತನ ಪಡೆದುಕೊಳ್ಳುವವರು ಸರ್ಕಾರಿ ನೌಕರರು. ಅವರಲ್ಲದೆ ಸಾರಿಗೆ ನಿಗಮದಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸಾರ್ವಜನಿಕ ನೌಕರರು. ಈ ಪರಿಧಿಯೊಳಗೆ ಇರುವವರಿಂದ ತಪ್ಪಾದಾಗ ಸಹ ಅವರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿದೆ ಎಂದರು.
ಇವುಗಳ ಜೊತೆಗೆ ಪಂಚಾಯಿತಿಯಿಂದ ಆರಂಭವಾಗಿ ಮುಖ್ಯಮಂತ್ರಿಯವರೆಗೆ ಚುನಾಯಿತ ಪ್ರತಿನಿಧಿಗಳು, ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಅಂದರೆ ೧,೨೦,೦೦೦ ರೂ. ಮೂಲ ವೇತನ ಪಡೆಯುವವರು ಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ಅದಕ್ಕಿಂತ ಕೆಳಗಿನ ವೇತನ ಪಡೆಯುವವರು ಮಾತ್ರ ಉಪಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ಸರ್ಕಾರದಿಂದ ದುರ್ನಡತೆಯಾದ, ದುರಾಡಳಿತವಾದ ಸಂದರ್ಭದಲ್ಲಿ ಒಂದು ಸ್ವಾಯತ್ತತೆ ಇರುವ ಸಂಸ್ಥೆ ಇರಬೇಕು. ಅದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸಬಾರದು. ನಮ್ಮ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಈ ತೀರ್ಮಾನವಾಯಿತು. ಆಗ ಈ ಲೋಕಾಯುಕ್ತ ಹಾಗೂ ಲೋಕಪಾಲ್ ಕಾಯ್ದೆ ಜಾರಿಗೆ ಬಂದಿತು ಎಂದು ತಿಳಿಸಿದರು.
ಇದಕ್ಕೆ ಕಾನೂನಿನ ಪರಿಣತಿ, ಸಮಾಜದ ಬಗ್ಗೆ ಕಳಕಳಿ, ಈಗಾಗಲೇ ಸಮಾಜದ ಲೋಪದೋಷ ತಿದ್ದುವ ಕೆಲಸ ಮಾಡಿದವರು, ನ್ಯಾಯಯುತ ಪ್ರಕ್ರಿಯೆ ಅನುಸರಿಸಿದವರು, ಸಾಮಾನ್ಯ ನ್ಯಾಯ ಎತ್ತಿಹಿಡಿದವರು ಎನ್ನುವ ಪ್ರಸ್ತಾವ ಬಂದಾಗ ಉಚ್ಚ ನ್ಯಾಯಾಲಯದಲ್ಲಿ ಕನಿಷ್ಠ ಹತ್ತು ವರ್ಷ ಕಾರ್ಯ ನಿರ್ವಹಿಸಿದ ನಿವೃತ್ತ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ, ಕನಿಷ್ಠ ಐದು ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದ ನ್ಯಾಯಮೂರ್ತಿಗಳನ್ನು ಉಪಲೋಕಾಯುಕ್ತರನ್ನಾಗಿ ನೇಮಕ ಮಾಡಲು ತೀರ್ಮಾನವಾಯಿತು ಎಂದರು.
ಸಹಜವಾದ, ಅಸಹಜವಾದ ಮತ್ತು ದುರುದ್ದೇಶಪೂರಿತವಾದ ತಪ್ಪುಗಳಾದ ಸಂದರ್ಭ ಉಭಯ ಪಕ್ಷಗಾರರಿಗೆ ಸಮಾನ ಅವಕಾಶ ನೀಡಿ ಕೂಲಂಕಷವಾಗಿ ವಿಚಾರಣೆ ಮಾಡಿ ನಿರ್ದಿಷ್ಟವಾದ ತೀರ್ಪು ನೀಡಲು ಲೋಕಾಯುಕ್ತಕ್ಕೆ ನ್ಯಾಯಾಧೀಶರ ಒಂದು ಪಡೆಯನ್ನೇ ನೇಮಕ ಮಾಡಲಾಯಿತು. ಲೋಕಾಯುಕ್ತಕ್ಕೆ ಒಂದು ಬಲವಾಗಿರುವುದೆಂದರೆ ಜಿಲ್ಲಾ ನ್ಯಾಯಾಧೀಶರ ಕಾನೂನು ಪಡೆ. ಇನ್ನೊಂದು ಬಲವಾದ ವ್ಯವಸ್ಥೆ ಎಂದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವ ಕಾರ್ಯವನ್ನು ಲೋಕಾಯುಕ್ತ ಪೊಲೀಸ್ ಇಲಾಖೆಗೆ ನೀಡಲಾಗಿದೆ. ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತಾಂತ್ರಿಕ ವರ್ಗವಿದೆ. ಆಡಳಿತಾತ್ಮಕ ವಿಭಾಗವೂ ಸೇರಿದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇಲಾಖೆಯಂತೆಯೇ ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲೂ ಕೂಡ ಎಲ್ಲಾ ಹಂತದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು ೧೬೦೦ ರಷ್ಟು ಮಂದಿ ಇದ್ದಾರೆ. ಒಬ್ಬರು ಲೋಕಾಯುಕ್ತರು ಹಾಗೂ ಇಬ್ಬರು ಉಪಲೋಕಾಯುಕ್ತರು ಸೇರಿದಂತೆ ಸುಮಾರು ೪೦ ಮಂದಿ ನ್ಯಾಯಾಧೀಶರಿದ್ದಾರೆ ಎಂದು ಇಲಾಖೆಯ ಸ್ವರೂಪವನ್ನು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ನಮ್ಮ ಸಮಾಜ ವ್ಯವಸ್ಥೆಯ ಪ್ರತಿಯೊಂದು ಭಾಗಗಳನ್ನು ಅವಲಂಬಿಸಿ ಬಳಸಿಕೊಳ್ಳುತ್ತಿದ್ದೇವೆ. ಹೀಗಿರುವಾಗ ನಾವು ಸಮಾಜಕ್ಕೆ ಕೊಡುಗೆ ನೀಡುವುದು ಅಗತ್ಯ ಎಂದರು.
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ಸ್ವಾಗತಿಸಿದರು. ಉಪಲೋಕಾಯುಕ್ತರ ಜೊತೆ ಆಗಮಿಸಿರುವ ಇತರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್, ಶಿವಾಜಿ ಅನಂತ್ ನಲವಾಡೆ, ಹಿರಿಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ, ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪಿ.ಬಿ.ನೇಹಾ ಉಪಸ್ಥಿತರಿದ್ದರು.

Related posts

ಹೈಕೋರ್ಟ್ ಜಡ್ಜ್ ವಿರುದ್ದ ಆರೋಪ: ಕ್ಷಮೆಯಾಚಿಸಲು ಅರ್ಜಿದಾರ ಮತ್ತು ವಕೀಲರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

Editor

ರಾಜ್ಯದಲ್ಲಿ 1245 ಕೋಟಿ ರೂ. ಹೂಡಿಕೆ; ವೈಜಿ-1 ಘೋಷಣೆ

Editor

ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಶರತ್ ಆನಂತಮೂರ್ತಿ ನೇಮಕ….

Editor