ಚಿಕ್ಕಮಗಳೂರು: ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿ ಪಡೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶದ ಏಕತೆಗೆ ಕಾರಣಕರ್ತರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಮ್ ಅಮಟೆ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಂದು ನಗರದ ಜಿಲ್ಲಾ ಪೊಲೀಸ್ ಕಚೇರಿ ಮುಂಭಾಗದ ಸರ್ಕಲ್ ಬಳಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನ-ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಭಾರತದ ಏಕೀಕರಣಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ’ಭಾರತದ ಏಕೀಕರಣದ ರೂವಾರಿ’ ಎಂದು ಕರೆಯಲಾಗುತ್ತದೆ. ಅವರಲ್ಲಿನ ದೇಶಪ್ರೇಮ ಮಾದರಿಯಾಗಿದೆ ಎಂದರು.
ರಾ?ದ ಏಕತೆ ಮತ್ತು ಸಾರ್ವಭೌಮತೆಯನ್ನು ಕಾಪಾಡಿದ ಹಾಗೂ ಅವುಗಳನ್ನು ತಮ್ಮ ಕಾರ್ಯಗಳ ಮೂಲಕವೇ ಎತ್ತಿ ಹಿಡಿದ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರ ಜೀವನ ಮತ್ತು ಆದರ್ಶಗಳು ಈ ಕಾಲಕ್ಕೂ ಪ್ರಸ್ತುತ ಮತ್ತು ಅನುಕರಣೀಯ. ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಸರ್ದಾರ್ ವಲ್ಲಭಭಾಯಿ ಪಟೇಲ್. ಅದು ಸುಲಭದ ಕೆಲಸವಾಗಿರಲಿಲ್ಲ. ಸಂಸ್ಥಾನಗಳ ರಾಜಮಹಾರಾಜರೊಂದಿಗೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಪ್ರಧಾನಿ ಜವಾಹರಲಾಲ್ ನೆಹರು ಅವರು ಪಟೇಲ್ ಹಾಗೂ ಭಾರತದ ಕೊನೆಯ ವೈಸರಾಯ್ ಮೌಂಟ್ ಬ್ಯಾಟನ್‌ರ ರಾಜಕೀಯ ಸಲಹೆಗಾರ ವಿ.ಪಿ.ಮೆನನ್ ಅವರಿಗೆ ವಹಿಸಿದರು. ಪರಿಣಾಮಕಾರಿ ಕಾರ್ಯತಂತ್ರ ಮತ್ತು ದೂರದೃಷ್ಟಿಯೊಂದಿಗೆ ಈ ಕೆಲಸಕ್ಕೆ ಅಣಿಯಾದ ಪಟೇಲರು ತಮ್ಮ ಜಾಣ್ಮೆ ಮತ್ತು ಕಠಿಣ ನಿಲುವುಗಳಿಂದಲೇ ಅನೇಕ ಜಟಿಲ ಪರಿಸ್ಥಿತಿಗಳನ್ನು ತಿಳಿಗೊಳಿಸಿದರು ಎಂದರು.
ಗುಜರಾತಿನ ಏಕಥಾನ್ ಎಂಬ ನಗರದಲ್ಲಿ ಇಂದು ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಾರೆ ಹಾಗೂ ಬೃಹತ್ ಮಟ್ಟದಲ್ಲಿ ಪೊಲೀಸ್ ಪೆರೇಡ್ ನಡೆಯುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅನಂತರ ತಾಲ್ಲೂಕು ಕಚೇರಿಯವರೆಗೆ ನಡೆದ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೌರಾಯುಕ್ತ ಬಿ.ಸಿ.ಬಸವರಾಜ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಉಪಾಧೀಕ್ಷಕ ಶೈಲೇಂದ್ರ, ಪೊಲೀಸ್ ಮತ್ತಿತರ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.

