ಶಿವಮೊಗ್ಗ: ಸಿನಿಮಾಗಳು ಮನಸ್ಸನ್ನು ಹಗುರ ಮಾಡಬೇಕು ಮತ್ತು ಮನರಂಜನೆಯ ಜೊತೆಗೆ ಮಾಹಿತಿಯನ್ನು ನೀಡುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಅವರು ಇಂದು ಮಹಾನಗರಪಾಲಿಕೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ `ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2025ರ ಚಲನಚಿತ್ರ ದಸರಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿನಿಮಾ ಕ್ಷೇತ್ರವು ಒಂದು ಪ್ರತ್ಯೇಕವಾದ ಲೋಕ. ಇಲ್ಲಿ ಸಾವಿರಾರು ಕಲಾವಿದರು, ನಟರು, ನಿರ್ಮಾಪಕರು, ತಂತ್ರಜ್ಞರು ಬದುಕು ಕಟ್ಟಿಕೊಳ್ಳುತ್ತಾರೆ. ನಮ್ಮ ಕಲಾವಿದರು ಹಲವರಿಗೆ ಬದುಕನ್ನು ಕಟ್ಟಿಕೊಡುತ್ತಾರೆ. ಕಲೆ ಎಂಬುದೇ ಶ್ರೇಷ್ಟ. ಈ ಕಲೆ ಉಳಿಯಬೇಕು. ಬೆಳೆಯಬೇಕು. ಕೇವಲ ಮನರಂಜನೆ ಒಂದಿದ್ದರೆ ಸಾಲದು, ಅದರ ಜತೆಗೆ ಉತ್ತಮವಾದ ಸಂದೇಶಗಳು ಕೂಡ ಸಮಾಜಕ್ಕೆ ಹೋಗಬೇಕು. ಇಂದು ಎಲ್ಲ ಕ್ಷೇತ್ರಗಳಲ್ಲೂ ರಾಜಕಾರಣ, ಜಾತೀಯತೆ ನುಗ್ಗಿವೆ. ಆದರೆ, ಸಿನಿಮಾ ಕ್ಷೇತ್ರ ಇದರಿಂದ ಹೊರಬರಬೇಕಾಗಿದೆ ಎಂದರು.
ಶಿಕ್ಷಣಕ್ಕೆ ಇಂದು ಆದ್ಯತೆ ನೀಡಲಾಗುತ್ತಿದೆ. ದೇವಸ್ಥಾನದ ಗಂಟೆಗಳ ಜತೆಗೆ ಶಾಲೆಯ ಗಂಟೆಗಳು ಬಾರಿಸಬೇಕಾಗಿದೆ. ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಸಿನಿಮಾಗಳು ಕೂಡ ಶಿಕ್ಷಣಕ್ಕೆ ಪೂರಕವಾಗಿದ್ದರೆ ಮತ್ತಷ್ಟು ಅನುಕೂಲವಾಗುತ್ತದೆ. ನಾನು ಕೂಡ ಸಿನಿಮಾ ಕ್ಷೇತ್ರದವನೇ. ನಿರ್ಮಾಪಕನಾಗಿ, ನಟನಾಗಿ, ಆಡಿಯೋ ಕಂಪನಿ ಮಾಲೀಕನಾಗಿ ಕೆಲಸ ಮಾಡಿದ ಅನುಭವವಿದೆ. ಉತ್ತಮ ಕತೆ ಸಿಕ್ಕರೆ, ಶರಣ್, ಕಾರುಣ್ಯಾ ರಾಮ್ ನಂತಹ ನಟ, ನಟಿಯರು ಡಿಸ್ಕೌಂಟ್ ನೀಡಿದರೆ ಈಗಲೂ ಸಿನಿಮಾ ನಿರ್ಮಾಣ ಮಾಡುವೆ. ಆ ಆಸೆ ಇನ್ನೂ ಇದೆ ಎಂದರು.
ಹಬ್ಬಗಳು ನಿತ್ಯನೂತನವಾಗಿರಬೇಕು. ಸಂಭ್ರಮ, ಸಡಗರಗಳು ತುಂಬಬೇಕು. ಚೈತನ್ಯ ತರಬೇಕು. ಭಕ್ತಿಯೂ ಇರಬೇಕು. ಸಾಮರಸ್ಯವೂ ಇರಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ದಸರಾ ನಾಡಿನಲ್ಲಿಯೇ ಪ್ರಖ್ಯಾತಿಯಾಗುತ್ತಿದೆ. ಇಂತಹ ಹಬ್ಬವನ್ನು ಮತ್ತಷ್ಟು ಚಂದಗಾಣಿಸೋಣ. ಎಲ್ಲರೂ ಒಟ್ಟಾಗಿ ಶಿವಮೊಗ್ಗ ದಸರಾವನ್ನು ವಿಜೃಂಭಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸಿನಿಮಾ ಸಂತೋಷ ಕೊಡುವ ಕ್ಷೇತ್ರ. ದಸರಾದಲ್ಲಿ ಚಲನಚಿತ್ರ ದಸರಾವನ್ನು ಸೇರ್ಪಡೆಗೊಳಿಸಿರುವುದು ಅತ್ಯಂತ ಖುಷಿ ಕೊಟ್ಟಿದೆ. ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ನಗರಸಭೆ ವತಿಯಿಂದ ದಸರಾ ಆಚರಿಸುತ್ತಾ ಬರಲಾಗುತ್ತಿದೆ. ಮೊದ ಮೊದಲು ಚಂದಾ ಎತ್ತಿ ದಸರಾ ಆಚರಣೆ ಮಾಡಲಾಗುತ್ತಿತ್ತು. ಆದರೆ ಈಗ ಪಾಲಿಕೆ ನಂತರ ಶಿವಮೊಗ್ಗ ದಸರಾಕ್ಕೆ ಒಂದು ವಿಶೇಷ ಅರ್ಥ ಬಂದಿದೆ. ಎಲ್ಲಾ ಸರ್ಕಾರಗಳು ಕೂಡ ಶಿವಮೊಗ್ಗ ದಸರಾಕ್ಕೆ ಅನುದಾನ ನೀಡುತ್ತಲೇ ಬಂದಿವೆ. ಈ ಬಾರಿಯೂ ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 50 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ. ಅದರ ಜತೆಗೆ ಪಾಲಿಕೆ ಹಣವೂ ಸೇರಿದಂತೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ದಸರಾವನ್ನು ಈ ಬಾರಿ ಅತ್ಯಂತ ವೈಭವದಿಂದ ಆಚರಿಸುತ್ತಿದ್ದೇವೆ. ನಮ್ಮ ಶಿವಮೊಗ್ಗ, ನಮ್ಮ ದಸರಾ ನಮ್ಮ ಹೆಮ್ಮೆ. ಈ ವರ್ಷ 11 ದಿನಗಳ ಕಾಲ ಹಬ್ಬ ಆಚರಿಸುತ್ತಿದ್ದೇವೆ. ಪಾಲಿಕೆಯ ಎಲ್ಲಾ ಸಿಬ್ಬಂದಿಗಳು, ಆಯುಕ್ತರು ನಮಗೆ ಸಹಕಾರ ನೀಡಿದ್ದಾರೆ ಎಂದರು.
ನಟ ಶರಣ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ನಾನು ಕಾರ್ಯಕ್ರಮದ ಅಧ್ಯಕ್ಷ ಮಾತ್ರ. ಆದರೆ ಶರಣ್ ಕಾಯಂ ಅಧ್ಯಕ್ಷರಾಗಿದ್ದಾರೆ. ಅವರ ಅಧ್ಯಕ್ಷ ಚಿತ್ರ ಶಾಶ್ವತವಾದ ಅಧ್ಯಕ್ಷ ಪಟ್ಟವನ್ನು ಕೊಟ್ಟಿದೆ. ಶಿವಮೊಗ್ಗಕ್ಕೆ ಇವರು ಮತ್ತು ನಟಿ ಕಾರುಣ್ಯಾ ರಾಮ್ ಅವರು ಬಂದು ದಸರಾವನ್ನು ಮತ್ತಷ್ಟು ಚಂದಗಾಣಿಸಿದ್ದಾರೆ ಎಂದರು.
ನಟ ಶರಣ್ ಮಾತನಾಡಿ, ಶಿವಮೊಗ್ಗ ನನ್ನ ಮೆಚ್ಚಿನ ಊರು. ಬಹಳ ಜನರು ಇಲ್ಲಿ ನನಗೆ ಸ್ನೇಹಿತರಿದ್ದಾರೆ. ಶಿವಮೊಗ್ಗಕ್ಕೆ ಬರುವುದೇ ಒಂದು ಖುಷಿ. ನನ್ನ ಹೃದಯದಲ್ಲಿ ಶಿವಮೊಗ್ಗಕ್ಕೆ ಒಂದು ಸ್ಥಾನ ನೀಡಿದೆ. ದಸರಾದಂತಹ ಹಬ್ಬದಲ್ಲೂ ಕೂಡ ಸಿನಿಮಾ ಕ್ಷೇತ್ರಕ್ಕೆ ಸ್ಥಾನ ಕೊಟ್ಟಿರುವುದು ಅತ್ಯಂತ ಶ್ಲಾಘನೀಯ. ಸಿನಿಮಾ ಕೂಡ ಇಂದು ಕಷ್ಟವಾಗುತ್ತಿದೆ. ಇರುವ ಥಿಯೇಟರ್ ಗಳೆಲ್ಲ ಮುಚ್ಚಿಬಿಟ್ಟಿವೆ. ಸಿನಿಮಾ ನಿರ್ಮಾಣ ಕೂಡ ಕಷ್ಟವಾಗುತ್ತಿದೆ. ಇಷ್ಟರ ನಡುವೆಯೂ ಸಿನಿಮಾ ಉಳಿಯುತ್ತದೆ ಎಂದರು.
ನಟಿ ಕಾರುಣ್ಯಾ ರಾಮ್ ಮಾತನಾಡಿ, ಶಿವಮೊಗ್ಗ ಒಂದು ಬ್ಯೂಟಿಫುಲ್ ಜಿಲ್ಲೆ. ಇಲ್ಲಿಗೆ ಬರುವುದೆಂದರೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ರೋಮಾಂಚನವಾಗುತ್ತದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾವೇ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ ಎಂಬುದು ಇಲ್ಲಿಗೆ ಬಂದಾಗ ಗೊತ್ತಾಯಿತು. ಶಿವಮೊಗ್ಗದಲ್ಲೂ ಕೂಡ ಒಂದು ಸ್ಟಾರ್ ನೈಟ್ಸ್ ಕಾರ್ಯಕ್ರಮ ಆಯೋಜನೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಪಾಲಿಕೆ ಮಾಜಿ ಸದಸ್ಯರಾದ ನಾಗರಾಜ್ ಕಂಕಾರಿ, ರೇಖಾ ರಂಗನಾಥ್, ಇ. ವಿಶ್ವಾಸ್, ಹೆಚ್. ಪಾಲಾಕ್ಷಿ, ಪ್ರಗತಿ ಸ್ಟುಡಿಯೋ ಅಶ್ವತ್ಥ್ ನಾರಾಯಣ್, ನೀನಾಸಂ£ ಬಿಂಬಶ್ರೀ, ನಿರ್ದೇಶಕ ಪ್ರವೀಣ್ ಕೃಪಾಕರ್, ಬಸವರಾಜ್ ಮೊದಲಾದವರಿದ್ದರು.
ಚೈತ್ರಾ ನಿರಂತರ ಕಾರ್ಯಕ್ರಮ ನಿರೂಪಿಸಿದರು. ನಟ ಶರಣ್, ನಟಿ ಕಾರುಣ್ಯಾರಾಮ್, ಹಾಡು ಹೇಳಿ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.
previous post