ಕೊಡಗು: ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ಇಂದು ಪವಿತ್ರ ತೀರ್ಥೋದ್ಭವವಾಗಿದ್ದು ನಾಡಿನ ಜೀವದಾತೆ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿಬಂದು ಭಕ್ತರಿಗೆ ದರ್ಶನ ನೀಡಿದ್ದಾಳೆ.
ಕಾವೇರಿ ಉಗಮಸ್ಥಾನ ತಲಕಾವೇರಿ ಉಕ್ಕಿಬಂದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ. ತುಲ ಲಗ್ನದಲ್ಲಿ 7.40 ನಿಮಿಷಕ್ಕೆ ಕಾವೇರಿ ಉಕ್ಕಿ ಬಂದಿದ್ದು, ಕೊಡವರು ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪ ಹಿಡಿದು ಕಾವೇರಿಗೆ ಪೂಜೆ ಸಲ್ಲಿಸಿದರು.
ಜೈ ಜೈ ಮಾತೆ ಕಾವೇರಿ ಮಾತೆ ಜೈಕಾರದ ಹರ್ಷೋದ್ಘಾರದ ನಡುವೆ ಬ್ರಹ್ಮಕುಂಡಿಕೆಯಿಂದ ಕಾವೇರಿ ಹರಿದು ಬಂದಿದ್ದು ಭಕ್ತರು ತೀರ್ಥ ಕೊಳದಲ್ಲಿ ಸ್ನಾನ ಮಾಡಿ ಪುನೀತರಾದರು.