ಸಹ್ಯಾದ್ರಿ ಸುದ್ದಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಬಿ.ವೈ. ರಾಘವೇಂದ್ರ ಅವರಿಗೆ ನನ್ನ ಬಗ್ಗೆ ಭಯ ಶುರು: ಅಪಪ್ರಚಾರದಲ್ಲಿ ತೊಡಗಿದ್ದಾರೆ-ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಬಿ.ವೈ. ರಾಘವೇಂದ್ರ ಅವರಿಗೆ ನನ್ನ ಬಗ್ಗೆ ಭಯ ಶುರುವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ತಮ್ಮ ಸ್ವÀಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮೇಶ್ವರ ಕೆಫೆ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಬೇಕಲ್ಲದೆ, ಮುಂದೆ ಇಂತಹ ಯಾವುದೇ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬಂಧಿಸಲ್ಪಟ್ಟ ಆರೋಪಿಗಳಿಂದ ಇನ್ನಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ಇದರ ಪ್ರಕಾರ ಆರೋಪಿಗಳು ಹಿಂದೂ ದೇವಾಲಯಗಳನ್ನು ಸ್ಫೋಟಿಸುವ ಮತ್ತು ಹಿಂದೂ ನಾಯಕರ ಹತ್ಯೆಗೆ ಸ್ಕೆಚ್ ಗೆ ರೂಪಿಸಿದ್ದ ವಿಷಯ ತಿಳಿಸಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಒಂದು ಪಕ್ಷ ಇಂತಹ ಯಾವುದೇ ಘಟನೆ ನಡೆದರೆ ರಾಜ್ಯ ಸರ್ಕಾರ ಕೂಡ ಅಷ್ಟೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಹೇಳಿದರು.
ರಾಮೇಶ್ವರ ಕೆಫೆ ಸ್ಫೋಟಕ್ಕೆ ಈ ಸಂಚು ಸೀಮಿತವಾದಂತೆ ಕಾಣುತ್ತಿಲ್ಲ. ಹೀಗಾಗಿ ಗೃಹ ಸಚಿವರು, ಮುಖ್ಯಮಂತ್ರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ರಾಜಕಾರಣ ಬೇರೆ. ಇಂತಹ ಘಟನೆಗಳು ಬೇರೆ. ಇದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದರು.
ಆರ್.ಎಸ್.ಎಸ್. ಎಂದೂ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ. ಆ ಸಂಘಟನೆಯಲ್ಲಿ ಇರುವವರು ಯಾವುದೇ ಪಕ್ಷ ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ರಾಷ್ಟ್ರೀಯತೆಯ ಗುರಿ ಹೊಂದಿರುವವರಿಗೆ ಸಂಘ ಪರಿವಾರದ ಕಾರ್ಯಕರ್ತರು ಬೆಂಬಲಿಸುತ್ತಾರೆ. ಈ ಚುನಾವಣೆಯಲ್ಲಿ ನನ್ನ ನಿಲುವನ್ನು ಸಾಕಷ್ಟು ಸಂಘ ಪರಿವಾರದ ಕಾರ್ಯಕರ್ತರು ಒಪ್ಪಿ ಬೆಂಬಲಿಸಿದ್ದಾರೆ. ಬಿಜೆಪಿಯೇ ಬೇರೆ, ಆರ್.ಎಸ್.ಎಸ್. ಬೇರೆ ಎಂದು ್ಪ ಹೇಳಿದರು.
ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಪರಿಶುದ್ಧವಾಗಿರಬೇಕು ಎಂಬುದು ಆರ್ ಎಸ್ ಎಸ್ ಹೇಳುತ್ತದೆ. ನಾನೂ ಕೂಡ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದು, ಈ ಪರಿಶುದ್ಧತೆಯ ತತ್ವದ ಹಿನ್ನೆಲೆಯಲ್ಲಿ ಬಿಜೆಪಿ ಶುದ್ಧೀಕರಣದ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಎಂಬ ನನ್ನ ಮಾತಿಗೆ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬೇರೇನು ಹೇಳಬೇಕೆಂದು ಅವರೇ ಹೇಳಲಿ, ಅದರಂತೆ ಕರೆಯುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿದೆ. ಒಂದರ್ಥದಲ್ಲಿ ಇವರು ಚುನಾವಣಾ ಪಾರ್ಟ್ ನರ್ಸ. ಹೀಗಾಗಿಯೇ ಕಾಂಗ್ರೆಸ್ ಎಲ್ಲಿಯೂ ಸರಿಯಾದ ಪ್ರಚಾರ ಮಾಡುತ್ತಿಲ್ಲ.ಅವರ ಹೊಂದಾಣಿಕೆಯ ರಾಜಕಾರಣ ಢಾಳಾಗಿ ಕಾಣಿಸುತ್ತಿದೆ. ಮಧು ಬಂಗಾರಪ್ಪ ಮತ್ತು ರಾಘವೇಂದ್ರ ಎಲ್ಲಿಯೂ ಪರಸ್ಪರ ಟೀಕಿಸುತ್ತಿಲ್ಲ. ಇಬ್ಬರೂ ನನ್ನನ್ನು ಟೀಕಿಸುತ್ತಿದ್ದಾರೆ. ಇಂತಹ ಯಾವುದೇ ಟೀಕೆಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ರಾಘವೇಂದ್ರ ಅವರಿಗೆ ‘ಡಮ್ಮಿ’ ಅಭ್ಯರ್ಥಿ ಭಯವೇ ಇಲ್ಲ. ಬದಲಾಗಿ ನನ್ನ ಬಗ್ಗೆ ಭಯ ಶುರುವಾಗಿದೆ. ಹೀಗಾಗಿ ನನ್ನ ಬಗ್ಗೆ ಟೀಕಿಸುತ್ತಿದ್ದಾರೆ. ನನ್ನ ಕುರಿತು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾನು ಟಿಕೆಟ್ ಹಿಂದೆ ಪಡೆದು ಚುನಾವಣಾ ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದೇನೆ. ಬ್ರಹ್ಮ ಬಂದು ಹೇಳಿದರೂ, ಮೋದಿ ಹೇಳಿದರೂ ಹಿಂದಕ್ಕೆ ಪಡೆಯೋದಿಲ್ಲ ಎಂದು ಹೇಳಿದರೂ ಪುನಃ ಪುನಃ ವಾಪಸ್ಸು ಪಡೆಯುವ ಸಾಧ್ಯತೆ ಎಂದು ಗುಲ್ಲು ಹರಡಿಸುತ್ತಾರೆ. ಇದು ನನ್ನ ಬೆಂಬಲಿತ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡುವ ಯತ್ನ. ಆದರೆ ಇಂತಹ ಯತ್ನ ಸಫಲವಾಗುದಿಲ್ಲ. ನಾನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಉತ್ಸಾಹಿ ನಾಯಕ ಗೂಳಿಹಟ್ಟಿ ಶೇಖರ್ ಸ್ವಯಂಪ್ರೇರಿತರಾಗಿ ನನ್ನ ಬೆಂಬಲಕ್ಕೆ ಬಂದು ನಿಂತಿದ್ದಾರೆ. ಕಳೆದ 10 ದಿನಗಳಿಂದ ರಣೋತ್ಸಾಹದಲ್ಲಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಭೋವಿ, ದಲಿತ ಮತ್ತು ಹಿಂದುಳಿದ ವರ್ಗದವರನ್ನು ಸಂಪರ್ಕಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಇನ್ನೊಮ್ಮೆ ಪ್ರಧಾನಿಯಾಗಬೇಕೆಂಬ ಗುರಿ ಅವರದೂ ಕೂಡ ಆಗಿದೆ ಎಂದು ಈಶ್ವರಪ್ಪ ಹೇಳಿದರು.
ಸಂಘ್ ಕುಚ್ ನಹೀ ಕರೆಗಾ ಸ್ವಯಂ ಸೇವಕ್ ಸಬ್ ಕುಚ್ ಕರೆಗಾ ಎಂದು ಆರ್.ಎಸ್.ಎಸ್. ಸಂಚಾಲಕ ಗುರೂಜಿ ಬಹಳ ಹಿಂದೆಯೇ ಹೇಳಿದ್ದರು. ಆರ್.ಎಸ್.ಎಸ್.ನ ಸ್ವಯಂ ಸೇವಕ ಅವನಿಗೆ ಇಷ್ಟ ಬಂದ ಕಾರ್ಯ ಮಾಡಲು ಬದ್ಧ ಎಂಬುದನ್ನು ಹಿಂದೆಯೇ ಹೇಳಿದ್ದರು. ಈ ದೃಷ್ಟಿಯಿಂದ ಆರ್.ಎಸ್.ಎಸ್. ಸ್ವಯಂಸೇವರು ಅನೇಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದರು.
ಏ. 21 ರಂದು ಭದ್ರಾವತಿಯಲ್ಲಿ ನನ್ನ ಬೆಂಬಲಿಗ ತಮಿಳು ಸಮುದಾಯದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 40 ಸಾವಿರ ತಮಿಳು ಸಮಾಜದವರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಹಿಂದುಳಿದವರು ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸಿ ದೂರವಾಣಿ ಕರೆ ಮಾಡುತ್ತಿದ್ದಾರೆ. ಈಗಾಗಲೇ ತೀರ್ಥಹಳ್ಳಿ, ಬೈಂದೂರು, ಶಿಕಾರಿಪುರ, ಸಾಗರ ಕಡೆಯಿಂದ ಬೂತ್ ಮಟ್ಟದಲ್ಲಿ ಪ್ರಚಾರಕ್ಕೆ ಕಾರ್ಯಕರ್ತರು ಶುರು ಮಾಡಿದ್ದಾರೆ. ಏ. 18 ರಂದು ಬೈಂದೂರಿನಲ್ಲಿ ಬೂತ್ ಮಟ್ಟದ ಸಮಾವೇಶ ನಡೆಯಲಿದೆ ಎಂದರು.
ನಾನು ರಾಜ್ಯಪಾಲ ಅಥವಾ ರಾಜ್ಯಸಭಾ ಸದಸ್ಯ ಆಗುವುದಿಲ್ಲ ಎಂದು ವರಿಷ್ಠರಿಗೆ ಹಿಂದೆಯೇ ಹೇಳಿದ್ದೇನೆ. ಯಾವುದೇ ಆಮಿಷಕ್ಕೆ ಇನ್ನು ನಾನು ಬಲಿಯಾಗುವುದಿಲ್ಲ. ನನ್ನ ಮಗನಿಗೆ ಅನೇಕ ಆಮಿಷ ತೋರಿಸಿ ಅವರು ಮೋಸ ಮಾಡಿದ್ದಾಯಿತು. ಇನ್ನು ನಾನು ಮೋಸಕ್ಕೆ ಬಲಿಯಾಗುವುದಿಲ್ಲ ಸದೃಢ ನಿರ್ಧಾರ ತೆಗೆದುಕೊಂಡಿದ್ದು, ಮೋದಿ ಬಂದು ಹೇಳಿದರೂ ನಾನು ಹಿಂದೆ ಸರಿಯುವುದಿಲ್ಲ. ನನ್ನ ಬೆಂಬಲಿಗರು ಯಾವುದೇ ಅಪಪ್ರಚಾರಕ್ಕೆ ಕಿವಿಕೊಡಬೇಡಿ ನಿಮ್ಮ ಕಾರ್ಯ ಮುಂದುವರೆಸಿ ಎಂದರು.
ಈಶ್ವರಪ್ಪರನ್ನು ಗೆಲ್ಲಿಸಲು ಯುವಶಕ್ತಿ, ನಾರಿ ಶಕ್ತಿ, ರೈತ ಶಕ್ತಿ ಒಂದಾಗಿದೆ ಎಂದರು.
ಗೋಷ್ಟಿಯಲ್ಲಿ ಗೂಳಿಹಟ್ಟಿ ಶೇಖರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗ ಶಾಸ್ತ್ರಿ, ಗಂಗಾಧರ್ ಮಂಡೇನಕೊಪ್ಪ, ಶಿವಾಜಿ, ರಾಜಣ್ಣ, ತಿಪ್ಪೆಸ್ವಾಮಿ, ವಿಶ್ವಾಸ್ ಮತ್ತಿತರರು ಇದ್ದರು.

ಬಾಕ್ಸ್:
ಅಂಬೇಡ್ಕರ್ ಬಂದು ಹೇಳಿದರೂ ಸಂವಿಧಾನ ಬದಲು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟನೆ ನೀಡಿದ ಮೇಲೂ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಈ ವಿಚಾರವನ್ನೇ ಇಟ್ಟುಕೊಂಡು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಚಾರದಲ್ಲಿ ಆರ್ ಎಸ್ ಎಸ್ ಹೆಸರನ್ನು ಕೂಡ ಅನಗತ್ಯವಾಗಿ ಕರೆ ತರುತ್ತಿದ್ದಾರೆ. ಆರ್ ಎಸ್ ಎಸ್ ಎಂದೂ ಸಂವಿಧಾನದ ವಿಚಾರದಲ್ಲಿ ಈ ರೀತಿಯ ಅಭಿಪ್ರಾಯ ಹೇಳಿಲ್ಲ. ಕೇಂದ್ರ ಸರ್ಕಾರ ಕೂಡ ಹೇಳಿಲ್ಲ. ಸುಳ್ಳು ಸುದ್ದಿಯನ್ನೇ ಹತ್ತಾರು ಬಾರಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಯತ್ನ ನಡೆಸಲಾಗುತ್ತಿದೆ ಎಂದು ಟೀಕಿಸಿದರು.
ಚುನಾವಣಾ ಸಂದರ್ಭದಲ್ಲಿ ಆರ್ ಎಸ್ ಎಸ್ ಕುರಿತು ಮಾತನಾಡಿದರೆ ಲಾಭ ಮಾಡಿಕೊಳ್ಳಬಹುದು ಎಂದು ಇವರು ಭಾವಿಸಿದಂತಿದೆ. ಆದರೆ ನಿಜಕ್ಕೂ ಇವರಿಗೆ ಆರ್ ಎಸ್ ಎಸ್ ಕುರಿತು ಮಾತಿನಿಂದ ನಷ್ಟ ಅನುಭವಿಸುತ್ತಾರೆ ಎಂದು ಭವಿಷ್ಯ ನುಡಿದರು.
ದೇಶದ ಜನ ಈಗಾಗಲೇ ಆರ್ ಎಸ್ ಎಸ್ ಅನ್ನು ಒಪ್ಪಿಕೊಂಡಿದ್ದಾರೆ. ಸಂವಿಧಾನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ ಮೇಲೆ ಇನ್ನು ಈ ವಿಚಾರವನ್ನು ರಾಜಕೀಯಕ್ಕೆ ಎಳೆ ತರಬಾರದು ಎಂದರು.

Related posts

ಕುವೆಂಪು ವಿವಿಯಿಂದ ರಾಷ್ಟ್ರ ಮತ್ತು ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಆಯ್ಕೆಗೆ ಹೊರಟ ಸ್ವಯಂ ಸೇವಕಿಯರು.

Editor

ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ: ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ  ಸಿದ್ದತೆ

Editor

ಜಾಗತಿಕ ಹೂಡಿಕೆದಾರರ ಸಮಾವೇಶ: ಕೇಂದ್ರ ಸಚಿವರಿಗೆ ಆಹ್ವಾನ

Editor