ಮೈಸೂರು ಸ್ಯಾಂಡಲ್ ನಕಲಿ ಸೋಪ್ ಪ್ರಕರಣದಲ್ಲಿ ಬಿಜೆಪಿಯೂ ಭಾಗಿ- ಗಂಭೀರ ಆರೋಪ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, : ಹೈದರಾಬಾದ್ನಲ್ಲಿ ಮೈಸೂರು ಸ್ಯಾಂಡಲ್ ನಕಲಿ ಸೋಪ್ ತಯಾರಿಕೆ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಿಜೆಪಿಯೂ ಭಾಗಿಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕಾರ್ಖಾನೆ ನಡೆಸುತ್ತಿದ್ದ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಆರೋಪಿತ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಗಳಿಬ್ಬರೂ ಕೂಡ ಬಿಜೆಪಿಯ ಸಕ್ರಿಯ ನಾಯಕರು, ಕಾರ್ಯಕರ್ತರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ರಾಜಾ ಸಿಂಗ್ ಜೊತೆಗೆ ನಿಕಟ ಸಂಪರ್ಕದಲ್ಲಿ ಇದ್ದಾರೆ ಎಂದು ಆರೋಪಿಸಿದರು.
ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಹಾಗೂ ಮಾಜಿ ಶಾಸಕರ ಪುತ್ರನ ಜೊತೆ ಆರೋಪಿಗಳ ಸಂಪರ್ಕವಿದೆ. ಕಾರ್ಯಾಚರಣೆ ನಡೆದಿರುವುದು ರಾಜ್ಯದ ಆಸ್ತಿ ಉಳಿಸಿಕೊಳ್ಳುವುದಕ್ಕಾಗಿ. ಇದರಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ. ಬಿಜೆಪಿಯವರು ದುಡ್ಡು ಮಾಡುವುದಕ್ಕೆ ಯಾವುದಕ್ಕೂ ಹೇಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದರು.
ಬಿಜೆಪಿಯ ಎಂಎಲ್‌ಎಗಳ ಜೊತೆಗೆ ನಕಲಿ ಸೋಪ್ ತಯಾರಕ ಮಹಾವೀರ್ ಜೈನ್ ಇದ್ದಾನೆ. ಕನ್ನಡಿಗರು ಕಷ್ಟಪಟ್ಟು ಬೆವರು ಸುರಿಸಿ ಬಂಡವಾಳ ಹಾಕಿದ್ದನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಬಿಜೆಪಿಯ ಅಧಿಕೃತ ಪದಾಧಿಕಾರಿಗಳ ಜೊತೆಗೆ ಮಹಾವೀರ್ ಜೈನ್ ಇದ್ದಾನೆ. ಮಣಿಕಂಠ ರಾಥೋಡ್ಗೂ ನಕಲಿ ಸೋಪ್ ತಯಾರಿಕರಿಗೂ ಏನು ನಂಟು? ಪ್ರಥ್ವಿಸಿಂಗ್ ಸಲುವಾಗಿ ಎರಡು ದಿನ ಕಲಾಪ ಹಾಳು ಮಾಡಿದರು. ಈ ಪ್ರಥ್ವಿ ಸಿಂಗ್ ಪೊಲೀಸ್ ವಿಚಾರಣೆಗೆ ಹಾಜರಾಗುತ್ತಿಲ್ಲ. ಯಾಕೆ ಇವರೆಲ್ಲ ಬಿಜೆಪಿಯವರೇ ಸಿಗುತ್ತಾರೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.