ಶಿವಮೊಗ್ಗ : ಜಿಲ್ಲೆಯಾದ್ಯಂತ ಪುನರುಸು ಮಳೆ ಅರ್ಭಟಿಸತೊಡಗಿದ್ದು, ಮಲೆನಾಡಿನ ಪ್ರಮುಖ ನದಿಗಳು ಉಕ್ಕಿ ಹರಿಹತೊಡಗಿದೆ. ತುಂಗಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿದ್ದು, ಶಿವಮೊಗ್ಗದಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ಕೂಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಲೆನಾಡು ಘಟ್ಟ ಪ್ರದೇಶ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲೆಡೆ ಉತ್ತಮವಾಗಿ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಶರಾವತಿ, ಮಾಲತಿ ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವಿನಲ್ಲೂ ಸಾಕಷ್ಟು ಏರಿಕೆ ಕಂಡು ಬಂದಿದೆ.
ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆ, ಮಾಸ್ತಿಕಟ್ಟೆ, ನಿಟ್ಟೂರು, ನಗರ, ಸೊರಬ, ಸಾಗರ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಮಳೆಯಾಗುತ್ತಿದೆ. ಕೆರೆ-ಕಟ್ಟೆಗಳು, ಹಳ್ಳ ಕೊಳ್ಳೆಗಳು ತುಂಬಿವೆ. ಕುದುರೆಸು ಮಳೆಯ ಆರ್ಭಟಕ್ಕೆ ಕೆಲವಿದೆ ಜನ ಜೀವನ ಅಸ್ತವಸ್ಥಗೊಂಡಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಜಲಾಶಯಕ್ಕೆ 42,165 ಒಳ ಹರಿವು ಇದೆ.
ಕಳೆದ 24 ಗಂಟೆಯಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ 4.4 ಅಡಿ ಏರಿಕೆಯಾಗಿದ್ದು, ನೀರಿನ ಮಟ್ಟ 153 ಅಡಿಗೆ ತಲುಪಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯದಲ್ಲಿ ಈಗ 36.740 ಟಿಎಂಸಿ ನೀರು ಸಂಗ್ರಹವಾಗಿದೆ.
ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ, ಆಗುಂಬೆ ಮೊದಲದ ಕಡೆಗಳಲ್ಲಿ ಮಳೆಯ ಅರ್ಭಟ ಮುಂದುವರೆದಿದ್ದು, ತುಂಗಾ ನದಿ ಉಕ್ಕಿ ಹರಿಯಲಾರಂಭಿಸಿದೆ. ಈಗಾಗಲೇ ಕಾಜದವರು ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ತುಂಗಾ ನದಿಯ ನೀರಿನ ಮಟ್ಟ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ಪ್ರವಾಹದ ಭೀತಿ ಸೃಷ್ಟಿಸಿದೆ. ಕೆಲವೆಡೆ ನದಿಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ ತುಂಗಾ ಜಲಾಶಯಕ್ಕೆ 71,484 ಕ್ಯೂಸೆಕ್ ಒಳಹರಿವಿದೆ ಈಗಾಗಲೇ ಜಲಾಶಯ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ.
ಡ್ಯಾಂನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಕಳೆದ ಮೂರು ದಿನಗಳಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಡ್ಯಾಂನಿಂದ ಬಿಡುವ ನೀರಿನಲ್ಲಿ ಹೆಚ್ಚಳವಾದರೆ, ನಗರದ ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಈಗಾಗಲೇ ಜಿಲ್ಲಾಡಳಿತ ತಗ್ಗು ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ಶರಾವತಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಗರಿಷ್ಟ 1819 ಅಡಿ ಸಾಮಥ್ರ್ಯದ ಲಿಂಗನಮಕ್ಕಿ ಜಲಾಶಯ ಇದೀಗ 1787.8 ಅಡಿ ಭರ್ತಿಯಾಗಿದೆ. 69266 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ರೈಲ್ವೆ ಹಳಿ ಮೇಲೆ ಬಿದ್ದ ಮರ:
ಹೊಸನಗರ ತಾಲೂಕು ಬಟಾಣಿಜೆಡ್ಡು ಬಳಿ ಹಳಿ ಮೇಲೆ ಬೃಹತ್ ಮರ ಬಿದ್ದಿದ್ದರಿಂದ ತಾಳುಗುಪ್ಪ – ಬೆಂಗಳೂರು ನಡುವೆ ಸಂಚರಿಸುವ ಇಂಟರ್ಸಿಟಿ ಸಂಚಾರ ಸುಮಾರು 2 ಗಂಟೆ ವಿಳಂಬವಾಗಿರುವ ಘಟನೆ ನಡೆದಿದೆ.
ಭಾರಿ ಮಳೆಯಿಂದಾಗಿ ಇಂದು ಬೆಳಗ್ಗೆ ರೈಲ್ವೆ ಹಳಿ ಮೇಲೆ ಮರ ಬಿದ್ದಿತ್ತು. ಇದನ್ನು ಗಮನಿಸಿದ ಲೋಕೋ ಪೈಲೆಟ್ ರೈಲು ನಿಲ್ಲಿಸಿದ್ದರು. ರೈಲ್ವೆ ಇಲಾಖೆಯ ಇಂಟಿರಿಯರ್ ವರ್ಕ್ ತಂಡದ ಸದಸ್ಯರು ಕೂಡಲೆ ಸ್ಥಳಕ್ಕೆ ತೆರಳಿ ಮರ ತೆರವು ಕಾರ್ಯಾಚರಣೆ ನಡೆಸಿದರು.
ರೆಡ್ ಅಲರ್ಟ್: ಮಳೆ ಕುರಿತಂತೆ ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜುಲೈ 18 ಹಾಗೂ 19ರಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಅತೀ ಧಾರಾಕಾರ ಮಳೆ ಸುರಿಯಲಿದೆ

