ಶಿವಮೊಗ್ಗ : ನಮ್ಮ ಕನ್ನಡ ಕಾವ್ಯ ರಚನಾ ಪರಂಪರೆಯನ್ನ ಮರೆಯುತ್ತಿದ್ದೇವೆ. ಹೀಗಾಗಿ ನಮ್ಮ ಕನ್ನಡ ಪ್ರಾಚೀನ ಕವಿಗಳ ಕೃತಿಗಳ ಓದು ಕುಸಿಯುತ್ತಿದೆ. ಕವಿತೆ ರಚಿಸುವವರು ಈ ಬಗ್ಗೆ ವಿವೇಚಿಸಬೇಕಾದ ಸಂಕ್ರಮಣ ಸ್ಥಿತಿ ಎದುರಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾಲೇಜು ವಿದ್ಯಾರ್ಥಿ ವಿಭಾಗದ ಪ್ರಚಾರ ಪ್ರಮುಖ್ ತಿಮ್ಮಣ್ಣ ಭಟ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಜೂನ್ ೨೮ ರಂದು ಏರ್ಪಡಿಸಿದ್ದ ಛಂದೋಬದ್ಧ ಕಾವ್ಯ ರಚನಾ ಕಮ್ಮಟದಲ್ಲಿ ಕಮ್ಮಟಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು.
ಕಾವ್ಯಬಂಧದಲ್ಲಿ ಛಂದಸ್ಸಿನ ಬಳಕೆ ಸಹೃದಯರಿಗೆ ಓದಿನ ಆನಂದ ನೀಡುತ್ತದೆ. ಪಂಪ,ರನ್ನ ,ಕುಮಾರವ್ಯಾಸರ ಕೃತಿಗಳ ಸೌಂದರ್ಯ ಅಡಗಿರುವುದೇ ಛಂದಸ್ಸಿನಲ್ಲಿ. ಅಂತಹ ಕಾವ್ಯ ಲಕ್ಷಣಗಳನ್ನ ನಮ್ಮ ಕವಿತಾ ರಚನಾಕಾರರು ತಮ್ಮ ರಚನಾ ಪ್ರಕ್ರಿಯೆಯಲ್ಲಿ ಪ್ರಯತ್ನಿಸಬಹುದು. ನಮ್ಮ ಪರಂಪರೆಯ ಕಾವ್ಯಲಕ್ಷಣಗಳನ್ನ ತಮ್ಮ ಬರವಣಿಗೆಯಲ್ಲಿ ಮುಂದುವರೆಸಲು ಅವಕಾಶ ಹೇರಳವಾಗಿದೆ ಎಂದು ಬೆಂಗಳೂರಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾಲೇಜು ವಿದ್ಯಾರ್ಥಿ ವಿಭಾಗದ ಪ್ರಚಾರ ಪ್ರಮುಖ್ ತಿಮ್ಮಣ್ಣ ಭಟ್ ಹೇಳಿದರು.
ಕಾವ್ಯ ರಚನಾ ಕಮ್ಮಟದಲ್ಲಿ ಶ್ರೀತಿಮ್ಮಣ್ಣ ಭಟ್ ಮತ್ತು ಕವಿ ಮೃತ್ಯುಂಜಯ ತೇಜಸ್ವಿ ಮಾತನಾಡಿ,ಕನ್ನಡ ಚಲನಚಿತ್ರ ಗೀತೆಗಳು, ಭಾವಗೀತೆಗಳಲ್ಲಿನ ಛಂದಸ್ಸಿನ ಬಳಕೆ ಬಗ್ಗೆ ಕವಿ ಮೃತ್ಯುಂಜಯ ತೇಜಸ್ವಿ ಸೋದಾಹರಣ ಭಾಷಣ ಮಾಡಿದರು. ” ಲಯ ಮತ್ತು ಗತಿಗಳ ಅನುಸರಣೆ ಕವಿತೆಗಳಿಗೆ ಗೇಯತೆ ನೀಡುತ್ತದೆ. ಹೀಗಾಗಿ ಛಂದಸ್ಸಿನ ಚೌಕಟ್ಟು ಕವಿಯ ಪ್ರಯೋಗ ಪರಿಣಿತಿ,ಪ್ರತಿಭೆಗೆ ಸಾಕ್ಷಿಯಾಗುತ್ತದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವಿಭಾಗೀಯ ಸಂಚಾಲಕ ಶ್ರೀಹರ್ಷ, ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ, ಕಾರ್ಯದರ್ಶಿಗಳಾದ ಸುರೇಶ್ ಭಟ್, ಶಾಲಿನಿ ಅಜಿತ್, ಮಂಜುನಾಥ ಶರ್ಮ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿಯ ಜಯಶ್ರೀ ಗಣೇಶ್ ಪ್ರಾರ್ಥಿಸಿ, ಡಾ.ಜಿ.ಮುಕುಂದ್ ಅವರು ಸ್ವಾಗತಿಸಿ ಅತಿಥಿಗಳನ್ನ ಪರಿಚಯಿಸಿದರು. ಅಭಾಸಾಪದ ಕಾರ್ಯಕಾರಿ ಸಮಿತಿಯ ಕುಮಾರ ಶಾಸ್ತ್ರಿ ವಂದಿಸಿದರು.